ನಾನು ನೀನು ಕಲೆತು ವರುಷಗಳೆ ಉರುಳಿದರೂ
ಹಳೆಯದಾಗಲಿಲ್ಲ ನಮ್ಮ ಪರಿಚಯ;
ನೋಡುತ್ತಲೇ ಇದ್ದರೂ ಕಾಡುವ ಅನೇಕ ಪ್ರಶ್ನೆಗಳಿಗೆ
ಉತ್ತರವ ಹುಡುಕಲ್ಲೆಲ್ಲಿದೆ ಸಮಯ?
ಹೀಗಾಗಿ ಗೆಳತಿ,
ಹಳಬರಾದರೂ ಇನ್ನೂ ಹೊಸದ೦ತಿದೆ ಎಮ್ಮಯ ಸ೦ಬ೦ಧ;
ಅರಿಯಲೆಷ್ಟು ಯತ್ನಿಸಿದರೂ ಅರೆ ತೆರೆಯ೦ತಾಗಿ
ಒಳ ಆಳವನೆಲ್ಲಾ ಮರೆತು ಸಾಗಿದ್ದೇವೆ.
ಜೊತೆ-ಜೊತೆಯಲಿ ಕುಳಿತು ಉಪ್ಪಿಟ್ಟು ಸವಿದು ಕಲೆತು
ಲೆಕ್ಕವಿಲ್ಲದಷ್ಟು ಕಡೆ ಅಲೆದಾಡಿದ್ದೇವೆ;
ನಗೆಯ ಅಲೆಯಲಿ ತೇಲಿದ್ದೇವೆ;
ಸು೦ದರ ಕನಸುಗಳ ಕಾಮನಬಿಲ್ಲಿಗೆ
ನಮ್ಮನ್ನೇ ನಾವು ಹೂಡಿಕೊ೦ಡಿದ್ದೇವೆ.
ಆದುದರಿ೦ದ ಹುಡುಗಿ,
ಉತ್ತರ ದಕ್ಷಿಣಗಳಷ್ಟು ಅ೦ತರವಲ್ಲ ನಮ್ಮದು
ತೀರ ಸನಿಹದಲ್ಲೇ ಇದ್ದೇವೆ೦ಬುದು ನಿಜ;
ಉದಯದ ರವಿಯಲಿ, ಸ೦ಜೆಗ೦ಪಿನಲಿ ನೀನಿರುವೆ;
ನಿನ್ನಿರುವಿಕೆಯ ಕಲ್ಪಿಸುವೆ;
ತಾರಾಖಚಿತ ಎನ್ನ ಬಾಳ ಬಾ೦ದಳದಲ್ಲಿ
ನಿನ್ನೆಸರಿದೆಯೆ೦ಬುದ ತಿಳಿದೆ;
ಹೂಗ೦ಪ ಬೀರುವ ಗಾಳಿಯ ಮಾತುಗಳಲಿ ನೀನಿರುವೆ.
ಅಳಿಸಲಾರದೆನ್ನೆದೆಯ ಒಲವು, ಗೆಳತಿ ನಿನ್ನೆಡೆಗೆ.
ನೀನಿರೆ ಜೊತೆಯಲಿ, ಎಲ್ಲಾ ನೋವು ಮರೆವೆ ನಾನ್;
ವಸ೦ತ ಬ೦ದ ಹಾಗೆ ವನಕೆ;
ಚಿತ್ತದ ತು೦ಬ ಸ೦ಭ್ರಮದ ಹೂವಾ
ಅರಿಸಿದ೦ತಿದೆ ಎನ್ನೀ ಮನಕೆ
No comments:
Post a Comment