Tuesday, January 23, 2007

ನಾಳೆಗಾದರೂ ಸಿಗದೇ.....

ನಾವಾಗ ಬೇರ್ಪಡುವ ಹಾದಿ ಕವಲಿಗೆ ಬ೦ದು
ಗೊತ್ತಿತ್ತೇ ನಮಗದು ವಿದಾಯದ ಗಳಿಗೆಯೆ೦ದು
ಮೊದಲೇ ಗೊತ್ತಿತ್ತೇ ಹೀಗೆ ಕಳೆದು ಹೋಗುವೆವೆ೦ದು
ಕುಣಿಕೆ ಹುಬ್ಬಿನ ಕೆಳಗೆ ಕಣ್ಣಾ ನೀರಿನ ಕಟ್ಟೆ
ಕಟ್ಟಿ ನಿಲ್ಲಿಸಿಹ ನಿನ್ನ ಕಣ್ಣೊಳಗೆ ಕಟ್ಟಿ
ಬಿಗಿದ ತುಟಿಯಲ್ಲಿ ಸತ್ತ ರೋಶವ ಹೂತ
ನನ್ನ ಎದೆಯ೦ಗಳದಿ ಕತ್ತಿಯಿರಿತ ಆ ರಕ್ತಪಾತ
ಹೊರಳಿ ನೋಡಿದೆ ಮತ್ತೆ, ನಿ೦ತು ನೋಡಿದೆ ಮತ್ತೆ ಮತ್ತೆ,
ಕಾಣದಿದ್ದರೂ ಎಳೆ...
ಹೆಣೆದ ಎದೆಯೊಲುಮೆ ಹಗ್ಗ ಎಳೆಯುತ್ತೆ
ಉಳಿಯದೋ ಉಳಿಯುವುದೋ ನಮ್ಮ ಸ್ನೇಹ - ಗೆಳೆತನದ ಚಿತ್ರ
ಎ೦ದು ಬಿ೦ಬವ ಮತ್ತೆ ಮತ್ತೆ ಗ್ರಹಿಸಿತ್ತೇ???

ಸವೆದು ಹೋಯಿತು ಕಾಲ
ನೆಡೆದು ಬ೦ದೆನು ದಾರಿ ದೂರ ಬಹಳ
ನಕ್ಕೆನೆಷ್ಟೋ ಸಲ... ಅತ್ತೆನೆಷ್ಟೋ ಸಲ
ಮಕ್ಕಳಾಗಿ ಮರಿಗಳಾಗಿ ರಾಗಿ ಬೆಳೆದು
ತೆ೦ಗು ಧಾರಣೆಯಿಳಿದು
ಎಳ್ಳು, ಬೆಳಿ ಜೋಳ ಗರಿ ನೆಲಕ್ಕಿಳಿದು
ಅಲ್ಲಾಡಿ ಗಿಣಿ, ಅಲ್ಲಿ ಹಾರಾಡಿ ನವಿಲು
ಓಣಿಯಲ್ಲಾಡುತಾವೆ ನೆನಪುಗಳು...
ಧವಳಯ್ಯನ ಗುಡ್ಡದಲ್ಲಿ ನಾವು ಎಡವಿದ ಕಲ್ಲು
ಎಷ್ಟು ನೆನೆದರೂ ಮಿದಿಯದೀ ಕಲ್ಲು.
ಎಷ್ಟು ಬಗೆದರೂ ಸಿಗದು ಅ೦ಗಾಲಿನೊಳಗಿನ ಮುಳ್ಳು
ನಾನು ಸುಡುಗಾಡು ಜ೦ಗಮನೇ, ಬೇಡಿ ಅಲೆಯುವ ಜೋಗಿ.
ಅಲೆದಲೆದು ಊರೂರು, ಕದ ತಟ್ಟಿ ಎದೆ ಎದೆಯ,
ಅಳೆದುಕೊಳ್ಳುವೆ ಕಾಳು - ಕಣ್ಣೇರ ಬಾಳು
ಕದ್ದವರು ಕದಿಯಲಿ ನನ್ನ ಜೋಳಿಗೆಯ ಮುತ್ತು
ಮರೆತೆಲ್ಲೋ ಕಳೆಯಲಿ ನನ್ನ ಹೊತ್ತಿನ್ನ ತುತ್ತು
ಕ೦ಡೇನೆ... ಕಾಣೇನೆ ಕುರುಹರಿಯದಿಲ್ಲಿ ಆ ಸ್೦ಜೆ, ಜಾಮಗಳಲ್ಲಿ
ನಾನ೦ದು ಕಳೆದುಕೊ೦ಡ ಪಚ್ಹೆ, ವೈಢೂರ್ಯಗಳನ್ನು
ಅ೦ದು ನೀಲಿಮೆಗಿಳಿದ ನನ್ನೆದೆಯ ಸೂರ್ಯ
ಸ೦ಜೆಯಾಯಿತು ಕಣೇ...
ಈವೊತ್ತು ನನ್ನ ಜೇಬೊಳಗೆ ಮತ್ತೊ೦ದು ಸೊನ್ನೆ
ಮತೀಗ ಪಾಳುಗುಡಿ ಜಗುಲಿ
ಹರವಿಕೊ೦ಡಿಲ್ಲಿ ನಿನ್ನ ನೆನಪಿನ ಹಸಿಬೆ
ಕಾಲು ಕೀಲಿನ ನೋವು
ಬಣ್ಣ ಬಣ್ಣದ ಬಳೆಯ ಮಲ್ಹಾರ ಹೊತ್ತ ಹೆಗಲ ನೋವು
ಹೊರಳಿಕೊ೦ಡಷ್ಟೂ ನೆಲ ತಗ್ಗು ಕಲ್ಲೊತ್ತು.
ಹು೦!!! ನಾಳೆಗಾದರೂ ಸಿಗದೇ ನಿನ್ನ ತಾವಿನ ಗುರುತು

2 comments:

Shiv said...

ಗುರುಗಳೇ !!

ಈಗ ನನ್ನ ಸರದಿ ನಿಮಗೆ ಕೇಳೋಕೆ..ಎಲ್ಲಿ ಇಟ್ಟಿದೀರಿ ಇದೆನೆಲ್ಲಾ!?

>ಕ೦ಡೇನೆ... ಕಾಣೇನೆ ಕುರುಹರಿಯದಿಲ್ಲಿ ಆ ಸ್೦ಜೆ, ಜಾಮಗಳಲ್ಲಿ ನಾನ೦ದು ಕಳೆದುಕೊ೦ಡ ಪಚ್ಹೆ, ವೈಢೂರ್ಯಗಳನ್ನು

ತುಂಬಾ ಇಷ್ಟವಾದ ಸಾಲುಗಳು..ಜೋಗಿಯ ಮನದ ಮಾತುಗಳನ್ನು ಸೊಗಸಾಗಿ ಬರೆದಿದ್ದೀರಾ.

ಒಂದೇ ಡೌಟ್ !
ಜೊತೆಜೊತೆಯಲಿ ಗೆಳತಿಯೊಂದಿಗೆ ಜೀವನಪಯಣದಲಿ ನಡೆಯುತ್ತಿರುವ ನಿಮಗೆ ಜೋಗಿಯ ವೈರಾಗ್ಯ ಯಾಕೇ? ಕಳೆದುಕೊಂಡಿದ್ದಾರ ಹುಡುಕಾಟ ಯಾಕೇ?

Unknown said...

ಶಿಷ್ಯೋತ್ತಮ.. :-)
ಗುರುವು ಇನ್ನೂ ಹುಡುಕಾಟದಲ್ಲಿದ್ದಾರೆ... ;-)

~ಹರ್ಷ